ಜಿನೀವ ಒಡಂಬಡಿಕೆಗಳು -
	1864 ಮತ್ತು 1949ರ ನಡುವೆ ಸೇರಿದ ರಾಜತಾಂತ್ರಿಕ ಸಭೆಗಳಲ್ಲಿ ಭಾಗವಹಿಸಿದ್ದ ರಾಷ್ಟ್ರಗಳು ಯುದ್ಧದಲ್ಲಿ ತೊಂದರೆಗೊಳಗಾದವರನ್ನು ಉಪಚರಿಸುವುದಾಗಿ ಒಪ್ಪಿ ಸಹಿ ಹಾಕಿದ ನಾಲ್ಕು ಅಂತರರಾಷ್ಟ್ರೀಯ ಒಡಂಬಡಿಕೆಗಳು. 1949ರ ಜಿನೀವ ಸಭೆಯಲ್ಲಿ ಅವಕ್ಕೆ ಈಗಿನ ರೂಪ ಪ್ರಾಪ್ತವಾಯಿತು. ಮೊದಲನೆಯ ಒಡಂಬಡಿಕೆ 1864ರ ಜಿನೀವ ಸಭೆಯಲ್ಲಿ ಅಂಗೀಕರಿಸಲ್ಪಟ್ಟು ಜಾರಿಗೆ ಬಂತು. ರಣರಂಗದಲ್ಲಿ ಯುದ್ಧನಿರತ ಶಸಶ್ತ್ರ ಪಡೆಗಳ ಗಾಯಾಳುಗಳ ಮತ್ತು ರೋಗಿಗಳ ಶುಶ್ರೂಷೆ ಮತ್ತು ಪಾಲನೆ ಉತ್ತಮ ಮಟ್ಟದ್ದಾಗಿರಬೇಕೆಂಬ ಆ ಒಡಂಬಡಿಕೆಯಿಂದ ಅಂತರರಾಷ್ಟ್ರಿಯ ರೆಡ್‍ಕ್ರಾಸ್ ಸಂಸ್ಥೆಯ ಸ್ಥಾಪನೆಗೆ ಮಾರ್ಗವಾಯಿತು. 1907ರಲ್ಲಿ ನಡೆದ ಹೇಗ್ ಸಭೆ ಎರಡನೆಯ ಒಡಂಬಡಿಕೆಯನ್ನು ಅಂಗೀಕರಿಸಿತು. ಭೂಯುದ್ಧನಿರತ ಸಶಸ್ತ್ರ ಪಡೆಗಳಿಗೆ ಸಿಗುವ ಉತ್ತಮ ಪೋಷಣೆ ಮತ್ತು ರಕ್ಷಣೆಗಳು ಸಮುದ್ರದ ಮೇಲೆ ನೌಕಾಯುದ್ಧನಿರತ ಸಶಸ್ತ್ರ ಪಡೆಗಳಿಗೂ ಒದಗುವಂತಾಯಿತು. ಒಂದನೆಯ ಮಹಾಯುದ್ಧದಿಂದಾಗಿ ತಲೆದೋರಿದ ಯುದ್ಧಬಂದಿಗಳ ಸಮಸ್ಯೆಯ ಹಿನ್ನೆಲೆಯಲ್ಲಿ 1929ರ ಜಿನೀವ ಸಭೆ ಮೂರನೆಯ ಒಡಂಬಡಿಕೆಯನ್ನು ಅನುಮೋದಿಸಿತು. ಮೂರನೆಯ ಜಿನೀವ ಒಡಂಬಡಿಕೆ ಯುದ್ಧಬಂದಿಗಳ ಯೋಗ್ಯ ಉಪಚಾರ ಮತ್ತು ಅವರ ವಿಮೋಚನೆಯನ್ನು ಕುರಿತದ್ದು. 1949ರ ಜಿನೀವ ಸಮ್ಮೇಳನದ ಫಲವಾಗಿ ಜನ್ಮತಾಳಿದ ನಾಲ್ಕನೆಯ ಒಡಂಬಡಿಕೆ ಅತಿ ಮಹತ್ತ್ವವುಳ್ಳದ್ದು. ಎರಡನೆಯ ಮಹಾಯುದ್ಧದ ಸಮಯದಲ್ಲಿ ಭಾಗವಹಿಸಿದ್ದ ಸೈನಿಕರಲ್ಲದೆ ನಾಗರಿಕರೂ ಅಪಾರ ಕಷ್ಟನಷ್ಟಗಳಿಗೆ ತುತ್ತಾಗಿದ್ದರು. ಯುದ್ಧದ ಸಮಯದಲ್ಲಿ ನಾಗರಿಕರ ರಕ್ಷಣೆಗೆ ಸಂಬಂಧಿಸಿದ್ದು ನಾಲ್ಕನೆಯ ಒಡಂಬಡಿಕೆ. ಯುದ್ಧಬಂದಿ ಎಂಬ ಪದದ ಅರ್ಥವ್ಯಾಪ್ತಿಗೆ ನಾಗರಿಕರನ್ನೂ ಸೇರಿಸಲಾಯಿತು. ಎಲ್ಲ ರೀತಿಯ ಬಂಧಿಗಳಿಗೂ ಮಾನವೀಯ ಉಪಚಾರ ಮತ್ತು ಅನುಕೂಲಗಳನ್ನು ಒದಗಿಸುವುದು ಅವರನ್ನು ಬಂಧನದಲ್ಲಿಟ್ಟಿರುವ ರಾಷ್ಟ್ರದ ಹೊಣೆ. ಯುದ್ಧಬಂಧಿಗಳನ್ನು ರಣರಂಗದಿಂದ ದೂರವಾದ ಮತ್ತು ಸುರಕ್ಷಿತವಾದ ಸ್ಥಳದಲ್ಲಿರಿಸಿ ಅವರಿಗೆ ಆಹಾರ, ಬಟ್ಟೆ, ವೈದ್ಯಕೀಯ ಶುಶ್ರೂಷೆಗಳನ್ನೊದಗಿಸುವುದಲ್ಲದೆ ಅವರ ಧಾರ್ಮಿಕ, ಬೌದ್ಧಿಕ ಮತ್ತು ಶಾರೀರಿಕ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಬೇಕು. ಆಪಾದಿತ ಬಂದಿಗಳನ್ನು ಕಾನೂನುರೀತ್ಯ ವಿಚಾರಣೆಗೆ ಒಳಪಡಿಸಿ ನಿಷೇಧ, ಬಂಧಿಗಳ ವಿನಿಮಯ ಮತ್ತು ವಿಮೋಚನೆ ಮುಂತಾದ ಅಂಶಗಳು ನಾಲ್ಕನೆಯ ಒಡಂಬಡಿಕೆಯಲ್ಲಿ ಸೂಚಿತವಾಗಿವೆ. 

	ಜಿನೀವ ಒಡಂಬಡಿಕೆಗಳು ಮೂಲಭೂತವಾಗಿ ಮಾನವೀಯ ಭಾವನೆಗಳಿಂದ ಕೂಡಿರುವುದರಿಂದ ಇತ್ತೀಚಿನ ಯದ್ಧಗಳಲ್ಲಿ ಅವನ್ನು ಬಹುತೇಕ ರಾಷ್ಟ್ರಗಳು ಪಾಲಿಸಿಕೊಂಡು ಬಂದಿವೆ. ಕೊರಿಯ, ಭಾರತ-ಪಾಕಿಸ್ತಾನ ಮತ್ತು ವಿಯೆಟ್ನಾಂ ಯುದ್ಧಗಳಲ್ಲಿ ಸಂಬಂಧಪಟ್ಟ ರಾಷ್ಟ್ರಗಳು ಗಾಯಾಳುಗಳ ಪಾಲನೆ-ಪೋಷಣೆ, ಯುದ್ಧಬಂಧಿಗಳ ರಕ್ಷಣೆ, ವಿಮೋಚನೆಯನ್ನು ಕುರಿತಂತೆ ಜಿನೀವ ಒಡಂಬಂಡಿಕೆಗಳ ಸೂತ್ರಗಳನ್ನು ಅನುಸರಿಸಿವೆ. ಪ್ರಪಂಚದ ಎಲ್ಲ ರಾಷ್ಟ್ರಗಳೂ ಈ ಒಡಂಬಂಡಿಕೆಗಳಿಗೆ ಬದ್ಧವಾದರೆ ಯುದ್ಧದ ದುಷ್ಪರಿಣಾಮಗಳಿಂದ ಮಾನವ ಜನಾಂಗಕ್ಕೆ ರಕ್ಷಣೆ ನೀಡುವುದು ಸಾಧ್ಯವಾಗುತ್ತದೆ. 1949ರಲ್ಲಿ ಈ ಒಡಂಬಂಡಿಕೆಗಳಿಗೆ ಐವತ್ತೆಂಟು ರಾಷ್ಟ್ರಗಳು ಸಹಿ ಹಾಕಿದ್ದವು. 								(ಕೆ.ವಿ.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ